ಅಮೃತಬಳ್ಳಿ
ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ[೧]. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶಿಷ್ಟವಾಗಿ ಪರ್ಣಪಾತಿ ಹಾಗೂ ಒಣ ಕಾಡುಗಳಲ್ಲಿ ಬೆಳೆಯುತ್ತದೆ. ಎಲೆಗಳು ಹೃದಯಾಕಾರವನ್ನು ಹೊಂದಿರುತ್ತವೆ.
ಇದು ನಮ್ಮ ಮನೆಯಂಗಳದಲ್ಲಿ ಸುಲಭವಾಗಿ ಬೆಳೆಸಬಹುದಾದ ಔಷಧೀಯ ಬಳ್ಳಿ. ಇದರ ಕಾಂಡ, ಎಲೆ, ಬೇರು ಎಲ್ಲವೂ ಔಷಧೀಯ ಗುಣ ಹೊಂದಿವೆ. ಇದರ ಕಾಂಡದ ಒಂದು ತುಂಡನ್ನು ಮಣ್ಣಿನಲ್ಲಿ ನೆಟ್ಟರೆ ಬಳ್ಳಿಯ ರೂಪದಲ್ಲಿ ಹಬ್ಬುತ್ತದೆ. ಇದು ಬಾಡಿ ಒಣಗುವುದಿಲ್ಲ; ಸುಲಭದಲ್ಲಿ ಸಾಯುವುದಿಲ್ಲ. ಆದ್ದರಿಂದಲೇ ಇದಕ್ಕೆ ’ಅ- ಮೃತ’ ಎಂಬ ಹೆಸರು. ಬಳ್ಳಿಯನ್ನು ಮನೆಯ ಎದುರು ಚಪ್ಪರದಂತೆ ಹಬ್ಬಿಸಬಹುದು.ಇದರ ತೊಗಟೆಯ ಬಣ್ಣ ಬೂದಿಮಿಶ್ರಿತ ಕಂದು ಬಣ್ಣ. ಹೂಗಳ ಬಣ್ಣ ಹಸಿರು ಮಿಶ್ರಿತ ಹಳದಿ. ಕಾಯಿಯು ಮಾಗಿದಾಗ ಗಾಢ ಕೆಂಪು ಬಣ್ಣದ ದುಂಡಗಿನ ಹಣ್ಣಾಗುತ್ತದೆ. ಅಮೃತಬಳ್ಳಿಯು ಮರಗಳ ಮೇಲೆ ತೋಟಗಳ ಬೇಲಿಗಳ ಮೇಲೆ ಹಬ್ಬಿರುತ್ತದೆ ಹಾಗೂ ಕಾಡುಗಳಲ್ಲಿ ಪೊದೆಗಳ ಮೇಲೂ ಸಹ ಹಬ್ಬಿರುತ್ತದೆ. ಇದರ ಪತ್ರೆ ಹಸಿರು ಮತ್ತು ಹೃದಯಾಕಾರವಾಗಿರುತ್ತದೆ, ಮೃದುವಾಗಿರುತ್ತದೆ. ಕಾಂಡದ ಮೇಲೆ ತೆಳು ಪೊರೆಯಿರುತ್ತದೆ ಮತ್ತು ದಾರಗಳಂತೆ ಕಾಂಡದ ಭಾಗಗಳು ಇಳಿಬಿದ್ದಿರುತ್ತದೆ. ಪ್ರತಿಭಾಗವೂ ಕಹಿಯಾಗಿರುತ್ತದೆ. ಬೇವಿನಮರದ ಮೇಲೆ ಹಬ್ಬಿರುವ ಬಳ್ಳಿಯು ಅತೀ ಶ್ರೇಷ್ಟವಾದುದು. ಹೂಗಳು ಹಸಿರು ಬಣ್ಣದವು. ಹೂ ಬಿಡುವ ಕಾಲ ಫೆಬ್ರವರಿ. ದೊಡ್ಡ ದೊಡ್ಡ ಬಂಗಲೆಗಳ ಮುಂದೆ, ಪ್ರವಾಸಿ ಮಂದಿರಗಳ ಮುಂದೆ ಚಪ್ಪರ ಹಾಕಿ ಬಳ್ಳಿಯನ್ನು ನೆಡುತ್ತಾರೆ ಮತ್ತು ಥಂಡಿಸಡಕ್ ಅಥವಾ ಶೀತದ್ವಾರ ನಿರ್ಮಿಸುತ್ತಾರೆ. ಈ ಬಳ್ಳಿಯ ಮೇಲೆ ಬೀಸಿ ಬರುವ ಗಾಳಿ ಅಮೃತ ಸಮಾನವಾದುದು ಮತ್ತು ಈ ಬಳ್ಳಿಯಡಿಯಲ್ಲಿ ನಿಲ್ಲುವ ಅಥವಾ ಸಾಗುವ ಮನುಷ್ಯ, ಎತ್ತಿನಗಾಡಿ, ಪಶು-ಪಕ್ಷಿಗಳು ಮತ್ತು ಈಗಿನ ಆಧುನಿಕ ವಾಹನಗಳು ಅಪಘಾತಗಳಿಂದ ಸುರಕ್ಷಿತವಾಗಿರುವವು ಎನ್ನುವ ನಂಬಿಕೆಯಿದೆ.
ಇದು ತ್ರಿದೋಷಗಳಿಂದ (ಅಂದರೆ ವಾತ, ಪಿತ್ತ, ಕಫ) ಉಂಟಾದ ತೊಂದರೆಗಳನ್ನು ನಿವಾರಿಸುತ್ತದೆ. ಎಲ್ಲ ಬಗೆಯ ಜ್ವರಗಳಿಗೂ ಅಮೃತ ಬಳ್ಳಿ ಪರಿಣಾಮಕಾರಿ ಔಷಧಿ. ಅಮೃತ ಬಳ್ಳಿಯ ಕಾಂಡವನ್ನು ಜಜ್ಜಿ ರಸ ತೆಗೆದು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆ ಮೂರು ಬಾರಿಯಂತೆ (ಆಹಾರ ಸೇವನೆಗೆ ಮುಂಚೆ) ಸೇವಿಸಬೇಕು. ಅಮೃತ ಬಳ್ಳಿಯ ಕಾಂಡವನ್ನು ಇತರ ಔಷಧೀಯ ಸಸ್ಯಗಳೊಂದಿಗೆ ಬೆರೆಸಿ ಕಷಾಯ ಮಾಡಿ ಕುಡಿಯಬಹುದು. (ಸಂಬಾರ ಬಳ್ಳಿ, ಅಮೃತ ಬಳ್ಳಿ ಎಲೆ, ಮಜ್ಜಿಗೆ ಸೊಪ್ಪು, ತುಳಸಿ,ಲವಂಗತುಳಸಿ, ಅರಸಿನ ಪುಡಿ ,ಕಾಳುಮೆಣಸು,ಜೀರಿಗೆ,ಶುಂಠಿ). ಇದರ ಐದಾರು ಎಲೆಗಳನ್ನು ಪ್ರತಿನಿತ್ಯ ಸೇವಿಸಬಹುದು. ಎಲೆಯು ಸ್ವಲ್ಪ ಕಹಿ ಮತ್ತು ಒಗರಿನಿಂದ ಕೂಡಿದೆ. ಎಲೆ ಮತ್ತು ಕಾಂಡದಿಂದ ತಂಬುಳಿ ತಯಾರಿಸಬಹುದು. ಎಲೆ ಮತ್ತು ಕಾಂಡವನ್ನು ಜೀರಿಗೆಯೊಂದಿಗೆ ನುಣ್ಣಗೆ ಅರಿಯಬೇಕು. ಅದಕ್ಕೆ ಮಜ್ಜಿಗೆ ಸೇರಿಸಿ ಸಾಸಿವೆ ಒಗ್ಗರಣೆ ಕೊಟ್ಟರೆ ತಂಬುಳಿ ತಯಾರು. ಈ ಬಳ್ಳಿಯ ಮೇಲೆ ಬೀಸಿ ಬರುವ ಗಾಳಿಯು ಆರೋಗ್ಯಕ್ಕೆ ಹಿತಕಾರಿ ಮತ್ತು ಮನೆಗೆ ತಂಪು
ಕೃಪೆ : ಸಸ್ಯ ಕಣಜ
ಸೂಚನೆ : ಈ
ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು
ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.