ಮುಟ್ಟಿದರೆ ಮುನಿ
ಸಸ್ಯ ಪರಿಚಯ:-
ಆಡುಭಾಷೆಯಲ್ಲಿ ನಾಚಿಗೆ ಮುಳ್ಳು,ಮುಟ್ಟಿದರೆ ಮುಚಕ,ಮುಚ್ಗನ್ ಮುಳ್ಳು,ಪತಿವ್ರತೆ,ಮುಟ್ಟಿದರೆ ಮುನಿ,ಲಜ್ಜಾವತಿ,ಸಂಸ್ಕೃತದಲ್ಲಿ "ಅಂಜಲೀ ಕಾರಿಕೆ" ಆಂಗ್ಲದಲ್ಲಿ ಟಚ್ ಮಿ ನಾಟ್, ಹಿಂದಿಯಲ್ಲಿ ಚುಯ್ ಮುಯ್, ಸಸ್ಯಶಾಸ್ತ್ರೀಯ ಹೆಸರು ‘ಮಿಮೊಸ ಪುಡಿಕಾ’ (Mimosa Pudica) ಏಂದೆಲ್ಲಾ ಕರೆಸಿಕೊಂಡು (Touch me not) ಯಾರಿಗೂ ಬೇಡವಾಗಿ ಬೆಳೆಯುವ ಈ ಗಿಡದಲ್ಲಿ ಅಮೋಘವಾದ ಔಷಧೀಯ ಗುಣವಿದೆ.ಇದರ ಮೂಲ ದಕ್ಷಿಣ ಹಾಗೂ ಮಧ್ಯ ಅಮೆರಿಕ. ಮೈತುಂಬ ಮುಳ್ಳು, ಎಲೆಗಳನ್ನು ಮುಟ್ಟಿದೊಡನೆ ಮುದುಡಿಕೊಳ್ಳುತ್ತದೆ ಸ್ಪರ್ಶ ತಾಕಿದೊಡನೆ ನಾಚಿ ಕೆಂಪಾಗಿ, ಮುಸುಕೊದ್ದು ಕುಳಿತಂತೆ ಭಾಸವಾಗುತ್ತದೆ.ಇದೊಂದು ಪ್ರಕೃತಿಯ ರಹಸ್ಯವಾಗಿದ್ದು ಸಸ್ಯವು ತನ್ನನ್ನು ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಳವಡಿಸಿಕೊಂಡಿರುವ ತಂತ್ರವಿದು. ಈ ಸಸ್ಯವು ಹಸಿರು ಹುಲ್ಲು ಮೇಯುವ ಪ್ರಾಣಿಗಳಿಗೆ ಉತ್ತಮ ಆಹಾರವಾಗಿದ್ದು, ಹಸಿರಿನಿಂದ ಕಂಗೊಳಿಸುವ ಈ ಸಸ್ಯವನ್ನು ನೋಡಿದಾಕ್ಷಣ ಮೇಯಲು ಧಾವಿಸುತ್ತವೆ. ಆಗ ತನ್ನನ್ನು ರಕ್ಷಿಸಿಕೊಳ್ಳಲು ಮುದುರಲು ಆರಂಭಿಸಿದ ತಕ್ಷಣ ಒಂದಕ್ಕೊಂದು ತಗುಲುತ್ತಾ ಹೋಗಿ ಕ್ಷಣ ಮಾತ್ರದಲ್ಲಿ ವಿಶಾಲ ಪ್ರದೇಶದಲ್ಲಿ ಹರಡಿದ ಈ ಸಸ್ಯ ಮುದುಡಿಕೊಳ್ಳುತ್ತದೆ. ಇದರಿಂದ ಮೇಯುವ ಪ್ರಾಣಿಗಳಿಗೆ ಅಲ್ಲಿ ಕೇವಲ ಒಣಗಿದ ಸಸ್ಯಗಳಂತೆ ಕಂಡುಬರುತ್ತದೆ. ಇದರಿಂದ ಪ್ರಾಣಿಗಳು ಬೇರೆಡೆಗೆ ಹೋಗುತ್ತವೆ. ದೀರ್ಘಾವಧಿ ಕಳೆ ಗಿಡವಾಗಿರುವ ಇದು ಬೇರುಗಳಿಂದ ಅಭಿವೃದ್ದಿ ಹೊಂದುವುದರಿಂದ ಕಳೆನಾಶಕಗಳನ್ನು ಸಿಂಡಿಸಿದರೂ ಮೇಲಿನ ಭಾಗ ಒಣಗಿದಂತಾಗಿ ಮತ್ತೆ ಹದ ಸಿಕ್ಕಿದ ಕೂಡಲೇ ಬೆಳೆಯುತ್ತವೆ. ಒಂದು ಗಿಡದಿಂದ ಒಂದು ವರ್ಷಕ್ಕೆ ಸುಮಾರು ಒಂದು ಲಕ್ಷ ಬೀಜ ಉತ್ಪತ್ತಿಯಾಗುತ್ತವೆ. ಬೀಜವೇ ಇಲ್ಲದೆ ಭೂಮಿಯೊಳಗೆ ಬೇರುಗಳು ಹಬ್ಬಿ ಬೆಳೆಯುತ್ತವೆ,ಗಿಡವು ತಿಳಿ ನೇರಳೆ ಬಣ್ಣದ ಆಕರ್ಷಕ ಹೂವು ಬಿಡುತ್ತದೆ,ಹೂವು ಗಿಡದ ತುದಿಯಲ್ಲಿರುತ್ತದೆ, ಸಾಮಾನ್ಯವಾಗಿ ಈ ಹೂವಿನ ವ್ಯಾಸ ೧-೨ ಸೆಂಟಿಮೀಟರ್ ಗಳಷ್ಟೆ.
ಔಷಧೀಯ ಉಪಯೋಗಗಳು :
ಈ ಗಿಡವನ್ನು (ಹೂ ರಹಿತ) ಜಜ್ಜಿ ಬಟ್ಟೆಯಲ್ಲಿ ಕಟ್ಟಿ ಗಂಜಿಯಲ್ಲಿ ಹಾಕಿ ತಿಂದರೆ ಅಥವಾ ಕಷಾಯಮಾಡಿ ಕುಡಿದರೆ, ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಮೂಲವ್ಯಾದಿ(Piles) ಗುಣಮುಖವಾಗುತ್ತದೆ.ಮೂತ್ರ ಕೋಶದ ಕಲ್ಲು ನಿವಾರಣೆಯಲ್ಲಿ, ಮಹಿಳೆಯರ ಋತುಚಕ್ರ ಸರಾಗವಾಗಿ ಆಗುವಲ್ಲಿ, ಮೂಲವ್ಯಾಧಿ ಹಾಗೂ ಹಲ್ಲು ನೋವಿನ ನಿವಾರಣೆಯಲ್ಲಿ ಈ ಸಸ್ಯದ ಪಾತ್ರ ದೊಡ್ಡದು.ಈ ಗಿಡದಲ್ಲಿ ಅಮೋಘವಾದ ಔಷಧೀಯ ಗುಣವಿದೆ. ಈ ಸಸ್ಯದ ಎಲೆ, ಹೂವು, ಕಾಂಡ ಹಾಗೂ ಬೇರು ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ.
ಕೃಪೆ : ಸಸ್ಯ ಕಣಜ
ಸೂಚನೆ : ಈ
ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು
ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.
No comments:
Post a Comment