Sunday, October 21, 2018

ಪುನರ್ಪುಳಿ

ಪುನರ್ಪುಳಿ
ಆಹಾರ ಶೈಲಿಯಲ್ಲಾದ ಬದಲಾವಣೆ, ಅನಿಯಮಿತ ಸಮಯದಲ್ಲಿ ಆಹಾರ ಸೇವನೆ ಹೀಗೆ ಹಲವಾರು ಕಾರಣದಿಂದ ದೇಹದಲ್ಲಿ ಪಿತ್ತ ಹೆಚ್ಚಾಗುವ ಮೂಲಕ ಆಹಾರ ಸೇವನೆಯಲ್ಲಿ ಅರುಚಿ, ವಾಕರಿಕೆ ಬರುವಂತಾಗುವುದು ಹೀಗೆ ಹಲವು ರೀತಿಯಲ್ಲಿ ದೇಹಕ್ಕೆ ತೊಂದರೆಯುಂಟಾಗುತ್ತದೆ. ಇಂತಹ ಸಮಯದಲ್ಲಿ ದೇಹದಲ್ಲಿನ ಅಧಿಕ ಪಿತ್ತವನ್ನು ಕಡಿಮೆ ಮಾಡಲು ‘ಪುನರ್ಪುಳಿ’ ಅತ್ಯಂತ ಸಹಕಾರಿ.
ಪಶ್ಚಿಮ ಘಟ್ಟದಲ್ಲಿ ಯಥೇಚ್ಚವಾಗಿ ಬೆಳೆಯುವ ಪುನರ್ಪುಳಿಗೆ ಸ್ಥಳೀಯವಾಗಿ ಮುರುಗಲು ಎಂಬ ಹೆಸರಿದ್ದು, ಯಾವುದೇ ಪೋಷಣೆಯ ಅಗತ್ಯವಿಲ್ಲದೆ ಬೆಳೆಯುವ ಇದು ಏಪ್ರಿಲ್-ಮೇ ಯಲ್ಲಿ ಹಣ್ಣು ಬಿಡುತ್ತದೆ.
ಉಪಯೋಗ ಹೇಗೆ..?
ಚೆನ್ನಾಗಿ ಹಣ್ಣಾದ ಬೀಜ ತೆಗೆದು ಹೊರಗಿನ ಸಿಪ್ಪೆಯನ್ನು ಒಣಗಿಸಿ ಇಟ್ಟರೆ ವರುಷವಿಡೀ ಸಾರು ಮತ್ತು ಶರಬತ್ತು ಮಾಡಬಹುದಾಗಿದೆ. ಅಲ್ಲದೇ ತಾಜಾ ಹಣ್ಣಿನ ತಿರುಳನ್ನು ಹಿಂಡಿ ಅದರ ರಸದಿಂದಲೂ ಶರಬತ್ತು ಮಾಡಬಹುದು. ಇದರ ಬೀಜದಿಂದ ಎಣ್ಣೆಯನ್ನು ತಯಾರಿಸಬಹುದಾಗಿದ್ದು ಇದು ಕಾಲು ಒಡೆತಕ್ಕೆ ಪರಿಣಾಮಕಾರಿ ಮದ್ದಾಗಿದೆ.
ಸ್ವಲ್ಪ ಕಾಳುಮೆಣಸು, ಬೆಲ್ಲ, ಉಪ್ಪು ಹಾಕಿ ಕುದಿಸಿ ಕರಿಬೇವು, ಜೀರಿಗೆ ಮತ್ತು ಸಾಸಿವೆಯನ್ನು ತುಪ್ಪದಲ್ಲಿ ಒಗ್ಗರಣೆ ಹಾಕಿ ತಯಾರಿಸಿದ ಸಾರು ಪಿತ್ತವನ್ನು ನಿವಾರಿಸುತ್ತದೆ. ಈ ಪುನರ್ಪುಳಿಯಲ್ಲಿ ಕೆಂಪು ಮತ್ತು ಬಿಳಿ ಎಂಬ ಎರಡು ಪ್ರಬೇಧಗಳಿದ್ದು, ಪಿತ್ತ ನಿವಾರಣೆಗೆ ಬಿಳಿಯದ್ದು ಅತ್ಯುತ್ತಮವಾಗಿದೆ. ಪುನರ್ಪುಳಿ ಸಿಪ್ಪೆಯನ್ನು ಅಡುಗೆಯಲ್ಲಿ ಬಳಸಿದರೆ ರಕ್ತದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಇದು ಹೃದಯದ ಸಮಸ್ಯೆಯಿಂದಲೂ ದೂರವಿರಿಸಲು ಸಹಕಾರಿಯಾಗುತ್ತದೆ.
ಇಷ್ಟು ಮಾತ್ರವಲ್ಲದೇ ಶೀತ, ಕೆಮ್ಮು ಗುಣಪಡಿಸಲು, ಹಸಿವು ಹೆಚ್ಚಿಸಲು, ಬೊಜ್ಜು ಕರಗಿಸಲು ಪುನರ್ಪುಳಿಯನ್ನು ಉಪಯೋಗಿಸುತ್ತಿದ್ದು ಸಿಪ್ಪೆ ಒಣಗಿಸಿಟ್ಟರೆ ಅದರಿಂದ ಶರಬತ್ತನ್ನು ಬೇಕೆಂದಾಗ ತಯಾರಿಸಬಹುದು.

ಕೃಪೆ : ಸಸ್ಯ ಕಣಜ


ಸೂಚನೆ : ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.

No comments:

Post a Comment

ಅಮೃತಬಳ್ಳಿ

ಅಮೃತಬಳ್ಳಿ ಅಮೃತಬಳ್ಳಿಯು ಒಂದು ಔಷಧೀಯ ಸಸ್ಯವಾಗಿದೆ[೧]. ಇದು ಮೆನಿಸ್ಪರ್ಮೇಸೀ ಕುಟುಂಬಕ್ಕೆ ಸೇರಿದ ಒಂದು ಹಸುರು ಬಳ್ಳಿ. ಈ ಸಸ್ಯವು ನುಣುಪಾದ ಪೊದೆ ಆಗಿದೆ. ವಿಶ...