ಬೃಂಗರಾಜ
ಕನ್ನಡದಲ್ಲಿ ಗರುಗ, ಗರುಗದ ಸೊಪ್ಪು, ಕಾಡಿಗ್ಗರುಗ ಎಂದು ಕರೆಯಲ್ಪಡುವ ಭೃಂಗರಾಜ ಎಲ್ಲೆಡೆ ಕಳೆಯಂತೆ ಬೆಳೆಯುವ ಸಸ್ಯ . ಕೂದಲಿಗೆ ಬಣ್ಣ ಕೊಡುವ ಮತ್ತು ತಲೆಗೂದಲನ್ನು ಸೊಂಪಾಗಿ ಬೆಳೆಸುವ ಗುಣವುಳ್ಳವಾದ್ದರಿಂದ ಸಂಸ್ಕೃತದಲ್ಲಿ ಕೇಶರಂಜನ, ಕೇಶರಾಜ ಎಂಬ ಹೆಸರೂ ಇದೆ. ಅರ್ಧ ತಲೆನೋವಿಗೆ ಉತ್ತಮ ಔಷಧಿಯಾಗಿರುವುದರಿಂದ ಸೂರ್ಯಾವರ್ತ ಎಂಬ ಹೆಸರೂ ಇದೆ. ಭೃಂಗರಾಜ ತನ್ನಲ್ಲಿರುವ ಅಮೂಲ್ಯ ಗುಣಗಳಿಂದಾಗಿ ಪ್ರಾಚೀನ ಕಾಲದಿಂದಲೂ ಸೌಂದರ್ಯವರ್ಧಕ ಗಿಡಮೂಲಿಕೆಯಾಗಿ ಬಳಸಲ್ಪಡುತ್ತಿತ್ತೆಂದು ಶೌನಕೇಯ, ಅಥರ್ವ ಮತ್ತು ಕೌಶಿಕ ಸೂತ್ರಗಳಲ್ಲಿ ಉಲ್ಲೇಖ ದೊರೆಯುತ್ತದೆ. ಅಷ್ಟಾಂಗ ಹೃದಯದಲ್ಲಿ ವಾಗ್ಭಟ ಭೃಂಗರಾಜವನ್ನು ದಿನನಿತ್ಯ ಸೇವನೆ ಮಾಡವುದರಿಂದ ರಸಾಯನ (ಬಲದಾಯಕ ಔಷಧಿ)ವಾಗಿ ಕಾರ್ಯ ಮಾಡುತ್ತದೆಂದು ತಿಳಿಸಿದ್ದಾನೆ. ರಾಜನಿಘಂಟುವಿನಲ್ಲಿ ಕೃಷ್ಣವರ್ಣ (ನೀಲಿ) ಭೃಂಗರಾಜ ಉತ್ತಮ ಔಷಧೀಯ ಗುಣಗಳನ್ನು ಹೊಂದಿದೆಯೆಂದು ವಿವರಿಸಲಾಗಿದೆ. ಕಹಿರಸ ಹೊಂದಿದ್ದು ಚರ್ಮಕ್ಕೆ ಹಿತಕರವಾಗಿದೆ. ಇದರ ಎಲೆಗಳನ್ನು ಸಂಕಷ್ಟಹರ ಚತುರ್ಥಿ ವ್ರತದಲ್ಲಿ ಗಣಪತಿಗೆ, ನಿತ್ಯ ಸೋಮವಾರ ವ್ರತದಲ್ಲಿ ಶಿವಮತ್ತು ಗೌರಿಗೆ, ಶ್ರೀ ನರಸಿಂಹ ಜಯಂತಿ ವ್ರತದಲ್ಲಿ ವಿಷ್ಣುವಿಗೆ ಮತ್ತು ಶ್ರೀ ಉಮಾ-ಮಹೆಶ್ವರರಿಗೆ ಪೂಜಿಸುತ್ತಾರೆ.
ಸಸ್ಯವರ್ಣನೆ :-
ಎಕ್ ಲಿಪ್ಟ ಆಲ್ಬ ಎಂದು ವೈಜ್ಞಾನಿಕವಾಗಿ ಕರೆಯಲ್ಪಡುವ ಭೃಂಗರಾಜ ಕಾಂಪೋಸಿಟೆ ಕಟುಂಬಕ್ಕೆ ಸೇರಿದೆ. ಇದು ಎರಡು ಅಡಿ ಬೆಳೆಯುವ ಪುಟ್ಟ ಏಕವಾರ್ಷಿಕ ಸಸ್ಯ. ಕಾಂಡವು ತುಂಬಾ ಮೃದುವಾಗಿದ್ದು. ಆಚೆ ಈಚೆ ಕವಲುಗಳು ಆಕ್ರಮಿಸಿ ನೆಲದ ಮೇಲೆ ತೆವಳಿ ಬೆಳೆಯುತ್ತದೆ. ಹೂವು ಬಿಳಿಯದಾಗಿದ್ದು ಚಿಕ್ಕದಾಗಿರುತ್ತದೆ. ಒಣಗಿದಾಗ ಅದರೊಳಗಿಗುವ ಕಪ್ಪು ಬಣ್ಣದ ಬೀಜಗಳು ಹೊರಗೆ ಬರುತ್ತವೆ.
ಪುಷ್ಪಗಳ ಬಣ್ಣಗಳಿಗನುಗುಣವಾಗಿ ಬಿಳಿ, ನೀಲಿ, ಹಳದಿಬಣ್ಣದ ಮೂರು ವಿಧಗಳಿವೆ. ಕೇರಳದಲ್ಲಿ ವೈದ್ಯರು ಹೆಚ್ಚಾಗಿ ಹಳದಿಬಣ್ಣದ ಬೃಂಗರಾಜವನ್ನು ಔಷಧಿಯಲ್ಲಿ ಉಪಯೋಗಿಸುತ್ತಾರೆ. ನೀಲಿಬಣ್ಣದ ಭೃಂಗರಾಜ ಪಶ್ಚಿಮ ಬಂಗಾಳದಲ್ಲಿ ಭೀಮರಾಜ ಎಂಬ ಹೆಸರಿನಲ್ಲಿ ಪ್ರಸಿದ್ಧವಿದೆ.
ಉಪಯುಕ್ತ ಭಾಗ :-
ಪಂಚಂಗಗಳು ಅಂದರೆ ಬೇರು, ಕಾಂಡ, ಎಲೆ, ಹೂ, ಬೀಜಎಲ್ಲವೂ ಔಷಧೀಯ ಗುಣ ಹೊಂದಿವೆ.
ಔಷಧೀಯ ಗುಣಗಳು :-
ಅಜೀರ್ಣದಿಂದಾಗಿ ಹೊಟ್ಟೆಯುಬ್ಬರ ಉಂಟಾಗಿದ್ದರೆ ಭೃಂಗರಾಜವನ್ನು ಸಣ್ಣಗೆ ಹೆಚ್ಚಿಕೊಂಡು ಸ್ವಲ್ಪ ಎಣ್ಣೆಯಲ್ಲಿ ಹುರಿದು ಮೊಸರಿನಲ್ಲಿ ಜೀರಿಗೆ ಪುಡಿಯೊಂದಿಗೆ ಬೆರೆಸಿ ತಿನ್ನಬೆಕು.
ಚರ್ಮರೋಗಗಳಲ್ಲಿ ಭೃಂಗರಾಜದ ಬೇರನ್ನು ಕುಟ್ಟಿ ಪುಡಿ ಮಾಡಿ ನೀರಿನಲ್ಲಿ ಬೆರೆಸಿ ಲೇಪಿಸಬೆಕು.
ತಲೆನೋವಿನಿಂದ ಬಳಲುವ ವರು ಭೃಂಗರಾಜದ ರಸವನ್ನು ಎಳ್ಳೆಣ್ಣೆಯೊಂದಿಗೆ ಬೆರೆಸಿ ಹಣೆಗೆ ಲೇಪಿಸಿಕೊಳ್ಳಬೇಕು.ಎಲ್ಲ ದೇಶೀಯ ಯಕೃತ್ತಿನ ಟಾನಿಕ್ ಗಳು ಈ ಸಸ್ಯದ ಅಂಶ ಹೊಂದಿರುತ್ತದೆ.
ಕೂದಲುದುರುವಿಕೆ : ತಲೆಗೂದಲು ಉದುರುತ್ತಿದ್ದಲ್ಲಿ ಮತ್ತು ಚಿಕ್ಕವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾಗಲು ಆರಂಭವಾಗಿದ್ದಲ್ಲಿ ಭೃಂಗರಾಜದಿಂದ ತಯಾರಿಸಿದ ತೈಲವನ್ನು ಪ್ರತಿದಿನ ತಲೆಗೆ ಹಚ್ಚಿಕೊಂಡಲ್ಲಿ ಕೂದಲುದುರುವುದ ನಿಲ್ಲುವುದಲ್ಲದೇ ಸೊಂಪಾಗಿ ಆರೋಗ್ಯಪೂರ್ಣವಾಗಿ ಬೆಳೆಯುತ್ತದೆ.
ಕೃಪೆ : ಸಸ್ಯ ಕಣಜ
ಸೂಚನೆ : ಈ
ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು
ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.
No comments:
Post a Comment