ಆಡುಸೋಗೆ
ಆಡುಸೋಗೆ' ಔಷಧೀಯ ಗುಣಗಳನ್ನು ಮೈತುಂಬಿಕೊಂಡಿರುವ ಸಸ್ಯ. ಉಷ್ಣಗುಣವನ್ನು ಹೊಂದಿದ ಈ ಸಸ್ಯ, ನೆಗಡಿ,ಕೆಮ್ಮು ಮುಂತಾದ ಸಾಮಾನ್ಯ ಕಾಯಿಲೆಗಳಿಗೆ ರಾಮಬಾಣದಂತಿದೆ. ಆಡುಸೋಗೆ ಸೊಪ್ಪನ್ನು ಉಪಯೋಗಿಸಿ ಕಷಾಯವನ್ನು ಮಾಡುತ್ತಾರೆ. ಸ್ವಲ್ಪ ಕಹಿಯಾಗಿ ಕಾಣಿಸುವ ಸೊಪ್ಪಿನ ರಸ, ಅಪಾರವಾದ ಔಷಧೀಯ ಖಜಾನೆಯನ್ನೇ ಹೊಂದಿದೆ. ಈ ಸೊಪ್ಪಿನ ವೈಜ್ಞಾನಿಕ ಹೆಸರು, ಅಡತೋಡ ಝೀಲಾನಿಕಾ (Adhatoda zeylanica) ಈ ಸಸ್ಯದ ಸಾಮಾನ್ಯ ಹೆಸರು, ಮಲಬಾರ್ ನಟ್, ವಾಸಕ. ಸಂಸ್ಕೃತದಲ್ಲಿ ಶ್ವೇತಾವಾಸ, ವಾಸಕ, ಹಿಂದಿ ಭಾಷೆಯಲ್ಲಿ ಅರುಸ, ಮಲಯಾಳಂ ಭಾಷೆಯಲ್ಲಿ 'ಅಡಾಲೋದಕಂ'. ಇದು ’ಅಕಾಂತಕಿ' ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ. ಒಂದರಿಂದ ನಾಲ್ಕು ಮೀಟರ್ ಎತ್ತರ ಬೆಳೆಯುವ ಹಸಿರು ಕಾಂಡದ ಗಿಡ. ಇದರ ಎಲೆಗಳು ಮಾವಿನೆಲೆಯನ್ನು ಹೋಲುತ್ತದೆ. ಆದರೆ ಮೃದು ಮತ್ತು ನುಣುಪಾಗಿರುತ್ತದೆ. ಎಲೆಗಳು ಕೆಳಗಡೆ ವಾಲಿರುತ್ತವೆ. ಎಲೆಗಳ ತೊಟ್ಟು ಕಾಂಡಕ್ಕೆ ಸೇರುವ ತ್ರಿಕೋನದಲ್ಲಿ ಹೂ ಗೊಂಚಲು ಬಿಡುವುದು. ಪುಷ್ಪಪಾತ್ರೆ ಹೂವಿನ ತೊಟ್ಟಿನ ತುದಿಯಲ್ಲಿರುವುದು. ಇದರ ಮೇಲೆ ಹೂವುಗಳು ಗುಂಪಾಗಿ ತೆನೆಯಂತಿರುತ್ತದೆ. ಹೂವಿನ ಗುಚ್ಛವು ಬಿಳಿವರ್ಣದ್ದಾಗಿದ್ದರೂ ಅಲ್ಲಲ್ಲಿ ತಿಳಿ ನೇರಳೆ ಅಥವಾ ತಿಳಿ ಗುಲಾಬಿ ಬಣ್ಣವಿರುವುದು. ಕಾಯಿ ಚಪ್ಪಟೆಯಾಗಿರುತ್ತದೆ. ಇದರ ಒಳಗಡೆ ನಾಲ್ಕು ಬೀಜಗಳು ಇರುತ್ತವೆ. ಸಾಮಾನ್ಯವಾಗಿ ಪ್ರತಿ ಹಳ್ಳಿಯಲ್ಲಿಯೂ ಈ ಗಿಡವನ್ನು ಕಾಣಬಹುದಾಗಿದೆ. ಇದು ಬಹಳ ಉಪಯುಕ್ತವಾದುದು. ಇದರ ಎಲೆಗಳು ಸಿಂಹದ ಹಸ್ತದಂತಿರುತ್ತವೆ. ಆದುದರಿಂದ ಈ ಮೂಲಿಕೆಗೆ ಸಿಂಹ ಪರ್ಣಿ ಎಂದು ಸಂಸ್ಕ್ರತ ಗ್ರಂಥದಲ್ಲಿ ತಿಳಿಸುತ್ತವೆ. ಇದರಲ್ಲಿ ‘ವ್ಯಾಸಿಸೈನ್’ ಎನ್ನುವ ಕಟು ಕಹಿ ಕ್ಷಾರವಿರುತ್ತದೆ. ಇದು ಉಸಿರಾಟದ ಶ್ವಾನನಾಳಗಳ ವ್ಯಾಧಿಯನ್ನು ಗುಣಪಡಿಸುವುದರಲ್ಲಿ ಗಮನಾರ್ಹ ಪಾತ್ರವನ್ನು ವಹಿಸುತ್ತದೆ. ವಸಾಕ ಅನ್ನುವುದು ಮತ್ತೊಂದು ಹೆಸರು. ಜೇನು ದುಂಬಿಗಳು ಅತಿಯಾಗಿ ಬಯಸುವ ಮಕರಂದ ಭರಿತ ಪುಷ್ಪ ಬಿಡುವ ಗಿಡ.ಸೋಗೆ ಗಿಡ'ದ ಎಲೆಗಳಲ್ಲದೆ, ತೊಗಟೆ, ಬೇರು, ಹೂವುಗಳೆಲ್ಲವೂ ಉಪಯೋಗಕ್ಕೆ ಬರುವುದರಿಂದ ಪುಡಿ ತಯಾರಿಸಿ ಶೇಖರಿಸಿಡಬಹುದು. ಎಲೆ ಪುಡಿಯ ಕಷಾಯ ಗಾಯವನ್ನು ಗುಣಪಡಿಸುತ್ತದೆ. ಅಸ್ತಮಾ, ನೆಗಡಿ, ಕೆಮ್ಮು, ಮುಂತಾದ ರೋಗಗಳಿಗೆ ದಿವ್ಯೌಷಧಿಯೆಂದು ನಂಬುತ್ತಾರೆ. ಹೆಚ್ಚಾಗಿ ದಮ್ಮು ಕೆಮ್ಮು ಇದ್ದಾಗ, ಎಲೆಗಳನ್ನು ಬಾಡಿಸಿ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಕುಡಿದರೆ ಬೇಗನೆ ವಾಸಿಯಾಗುತ್ತದೆಯೆಂದು ಆಯುರ್ವೇದ ವೈದ್ಯರು ಹೇಳುತ್ತಾರೆ. ಇದು ಭೇದಿಗೆ ಅತ್ಯುತ್ತಮ ಮದ್ದು ಸಹಿತ. ಮನೆಯಲ್ಲಿ ಬೇರೆಗಿಡಗಳ ಜೊತೆಗೆ ಈ ಗಿಡವನ್ನೂ ನೆಡುವುದು ಒಳ್ಳೆಯದು. ಈ ವನಸ್ಪತಿಯನ್ನು 'ಆಡುಮುಟ್ಟದ ಸೊಪ್ಪು' ಎಂದು ಕರೆಯುತ್ತಾರೆ ಸಹಿತ.
ಸರಳ ಚಿಕಿತ್ಸೆಗಳು :-
ದಮ್ಮು, ಶ್ವಾಸವಿಕಾರ .
ಬೆಳ್ಳುಳ್ಳಿ, ಹಿಪ್ಪಲಿ, ಮೆಣಸು, ಕಟುಕರೋಹಿಣಿ ಮತ್ತು ಆಡುಸೋಗೆ ಎಲೆಗಳನ್ನು ಸಮತೂಕದಷ್ಪು ಬಿಸಿನೀರಿನಲ್ಲಿ ಅರೆದು ಸ್ವಲ್ಪ ಜೇನು ತುಪ್ಪ ಸೇರಿಸಿ ಶೋಧಿಸಿ ದಿನಕ್ಕೆ ಎರಡು ಬಾರಿ ಉಪಯೋಗಿಸುವುದು ಅಥವಾ ಆಡುಸೋಗೆ ಎಲೆಯ ಒಣಗಿದ ಚೂರ್ಣದ ಗೊಗೆಯನ್ನು ಬೀಡಿ ರೂಪದಲ್ಲಿ ಸೇದುದ್ದರಿಂದ ದಮ್ಮು ವ್ಯಾಧಿ ಉಪಶಮನವಾಗುತ್ತದೆ.
ಕೆಮ್ಮು .
ಸುಮಾರು 5ಗ್ರಾಂ ಆಡುಸೋಗೆ, 5ಗ್ರಾಂ ಹಸಿರು ಅಮೃತಬಳ್ಳಿಯ ಕಷಾಯ ಮಾಡಿ ಆರಿಸಿ ಶೋಧಿಸಿಟ್ಟುಕೊಳ್ಳುವುದು. ಇದನ್ನು ದಿವಸಕ್ಕೆರಡು ಬಾರಿ 10 ಗ್ರಾಂ ನಷ್ಟು ಶುದ್ಧ ಜೇನಿನಲ್ಲಿ ಕುಡಿಸುವುದು. ಇದು ಒಂದು ಉಪಯುಕ್ತವಾದ ವನೌಷಧಿ. ಮಕ್ಕಳಿಗಾದರೆ ಆಡುಸೋಗೆ ಎಲೆಗಳ 5ಗ್ರಾಂ ರಸವನ್ನು ಸ್ವಲ್ಪ ಜೇನಿನಲ್ಲಿ ಸೇರಿಸಿ, ಸ್ವಲ್ಪ ಬಿಸಿಮಾಡಿ ದಿವಸಕ್ಕೆ 4 ರಿಂದ 5 ಬಾರಿ ಕುಡಿಸುವುದು.
ಅಸ್ತಮ, ಗೂರಲು .
ಜ್ಯೇಷ್ಠಮಧು 10ಗ್ರಾಂ, ಹಿಪ್ಪಲಿ 20ಗ್ರಾಂ ಹಾಗೂ 5 ಗ್ರಾಂ ಆಡುಸೋಗೆ ಎಲೆಗಳನ್ನು ಚೆನ್ನಾಗಿ ಅರೆದು ಅಷ್ಟಾಂಶ ಕಷಾಯವನ್ನು ಮಾಡಿ ದಿವಸಕ್ಕೆ ಮೂರು ಬಾರಿ ಸ್ವಲ್ಪ ಜೇನು ಸೇರಿಸಿ ಕುಡಿಯುವುದು. ಅಥವಾ ಆಡುಸೋಗೆ ಎಲೆಯ ರಸ ಮತ್ತು ಸಮಭಾಗ ಸಕ್ಕರೆ ಸೇರಿಸಿ ರಸಾಯನ ಮಾಡಿ ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ ರಾತ್ರಿ ನೆಕ್ಕಿಸುವುದು. ಅಥವಾ 10-12 ಆಡುಸೋಗೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಕಷಾಯವನ್ನು ಮಾಡಿ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಸುವುದು.
ರಕ್ತಕಾಸ .
ಆಡುಸೋಗೆ ಎಲೆ ಮತ್ತು ಹಿಪ್ಪಲಿ ಚೂರ್ಣ ಸೇರಿಸಿ ಮಾಡಿದ ಕಷಾಯವನ್ನು ಪ್ರತಿ ದಿವಸ ಬೆಳಿಗ್ಗೆ ಮತ್ತು ಸಂಜೆ ಕುಡಿಸುವುದು. ಪ್ರಮಾಣ ಎರಡು ಟೀ ಚಮಚ ಅಥವಾ ಆಡುಸೋಗೆ ಮತ್ತು ಕೊತ್ತಂಬರಿ ಬೀಜ ನುಣ್ಣಗೆ ರುಬ್ಬಿ ಕಷಾಯವನ್ನು ಮಾಡಿ ಬೆಳಿಗ್ಗೆ ಮತ್ತು ರಾತ್ರಿ ಸ್ವಲ್ಪ ಕುಡಿಸುವುದು.
ಮೂತ್ರಾಶಯದ ಭಾದೆ, ನೋವು .
20ಗ್ರಾಂ ಆಡುಸೋಗೆ ಎಲೆಗಳ ರಸಕ್ಕೆ 20ಗ್ರಾಂ ಜೇನು ತುಪ್ಪವನ್ನು ಸೇರಿಸಿ ದಿವಸಕ್ಕೆ ಎರಡು ವೇಳೆ ಸೇವಿಸುವುದು ಹಾಗೂ ಬೇವಿನ ಎಲೆ ಮತ್ತು ಆಡುಸೋಗೆ ಎಲೆಗಳನ್ನು ಜಜ್ಜಿ ಸ್ವಲ್ಪ ಬಿಸಿ ಮಾಡಿ ಕಿಬ್ಬೊಟ್ಟೆಗೆ ಕಟ್ಟುವುದು ಅಥವಾ ಬಟ್ಟೆಯಲ್ಲಿ ಕಟ್ಟಿ ಶಾಖ ಕೊಡುವುದು ಇದರಿಂದ ಮೂತ್ರಾಶಯದ ನೋವು ನಿಲ್ಲುವುದು.
ಹಳುಕಡ್ಡಿ, ತುರಿ, ನವೆ .
ಆಡುಸೋಗೆಯ ಚಿಗುರೆಲೆಗಳ ಜೊತೆಗೆ ಸ್ಪಲ್ಪ ಅರಿಷಿಣ ಸೇರಿಸಿ ಗೋಮೂತ್ರದಲ್ಲಿ ನುಣ್ಣಗೆ ಅರೆದು ಲೇಪಿಸುವುದು. ಎಣ್ಣೆ ಪದಾರ್ಥಗಳನ್ನು ವರ್ಜಿಸುವುದು. ಸೋಪನ್ನು ಬಳಸದೆ ಶೀಗೆಕಾಯಿ ಹಚ್ಚಿ ಸ್ನಾನ ಮಾಡುವುದು.
ರಕ್ತಪಿತ್ತ .
ಶರೀರದ ಯಾವುದೇ ಭಾಗದಿಂದ ವಿನಾಕಾರಣ ರಕ್ತ ಬೀಳುವ ಕಾಯಿಲೆ ಅಂದರೆ ಕಿವಿ, ಕಣ್ಣು, ಮೂಗು, ಬಾಯಿ, ಮಲದ್ವಾರ ಹಾಗೂ ದೇಹದ ಒಳಗಡೆ ಅಂದರೆ ಕರಳು ಜಠರ ಇವುಗಳಿಂದ ರಕ್ತ ಬೀಳುವುದು. ಆಡುಸೋಗೆ ಹಸಿ ಎಲೆರಸ ಸುಮಾರು 15 ಗ್ರಾಂನಷ್ಟುನ್ನು ಸ್ವಲ್ಪ ಜೇನುತುಪ್ಪ ಸೇರಿಸಿ ದಿನಕ್ಕೆರಡು ವೇಳೆ ಐದು ದಿವಸ ಕುಡಿಸುವುದು ಅಥವಾ ಪರ್ಪಾಷ್ಠಕ ಆಡುಸೋಗೆ ಸೊಪ್ಪು, ಕೊತ್ತಂಬರಿ, ಒಣಗಿದ ದ್ರಾಕ್ಷಿ ಇವುಗಳ ಸಮತೂಕದಷ್ಟನ್ನು ಚೆನ್ನಾಗಿ ಕಿವುಚಿ 30 ಗ್ರಾಂ ನಷ್ಷು ಕುಡಿಯುವುದು. ದಿನಕ್ಕೆ ಮೂರುಬಾರಿ ಬಳಸುವುದು ಅಥವಾ ಮೇಲಿನ ವಸ್ತುಗಳ ನಯವಾದ ಚೂರ್ಣ ಮಾಡಿ ಒಂದು ಟೀ ಚಮಚದಷ್ಟು ಚೂರ್ಣವನ್ನು ಒಂದು ಬಟ್ಟಲು ಶುದ್ಧವಾದ ತಣ್ಣೀರಿನಲ್ಲಿ ರಾತ್ರಿ ಹಾಕಿ ಬೆಳಿಗ್ಗೆ ಈ ನೀರನ್ನು ಕುಡಿಯುವುದು.
ಕೆಮ್ಮು, ಜ್ವರ, ಉಬ್ಬಸ .
ಅಮೃತಬಳ್ಳಿ ಗುಳ್ಳದ ಬೇರು ಮತ್ತು ಆಡುಸೋಗೆ ಬೇರು ಇವುಗಳ 30 ಗ್ರಾಂ ಗಳಷ್ಟು ಕಷಾಯವನ್ನು ಮಾಡುವುದು, ಕಷಾಯವನ್ನು ಎರಡು ಭಾಗ ಮಾಡಿ, ಬೆಳಿಗ್ಗೆ ಸಾಯಂಕಾಲ ಕುಡಿಸುವುದು. ಈ ಮೂಲಿಕೆಗೆ ಶ್ವಾಸಕೋಶಗಳ ಬಾಧೆ ನೀಗಿ ಕೆಮ್ಮು, ದಮ್ಮು, ಉಬ್ಬಸ, ಗೂರಲು ವಾಸಿ ಮಾಡುವ ಮಹಾ ಗುಣವಿದೆ. ಶ್ವಾಶಕೋಶ ಶ್ವಾಸನಾಳದಲ್ಲಿರುವ ಕಫವನ್ನು ಕರಗಿಸಿ ಹೊರ ಹಾಕಿ ರಕ್ತ ಶುದ್ಧ ಮಾಡಿ ಜ್ವರವನ್ನು ತಗ್ಗಿಸಿ ರಕ್ತ ಉಗುಳುವ ವ್ಯಾಧಿಯನ್ನು ವಾಸಿ ಮಾಡುವ ಅಪೂರ್ವ ಶಕ್ತಿ ಇದೆ.
ವಾಸಾದಿಘೃತ(ಚರಕ ಸಂಹಿತ) .
ಆಡುಸೋಗೆ ಎಲೆಗಳ ರಸ ತ್ರಿಕಟು, ಹಿಪ್ಪಲಿ, ಜೀರಿಗೆ ಅಜಮೋದ, ಚಿತ್ರಮೂಲ, ಕಾಡು ಮೇಣಸಿನ ಬೇರು, ಇವುಗಳ ಕಲ್ಕದಿಂದ ತಯಾರಿಸಿದ ಮತ್ತು ಹಸುವಿನ ತುಪ್ಪದಿಂದ ಮಾಡಿದ ಘೃತವನ್ನು ಅರ್ಧ ಚಮಚದಷ್ಟಕ್ಕೆ ಒಂದು ಟೀ ಚಮಚ ಅಪ್ಪಟ ಜೇನು ಸೇರಿಸಿ ಸೇವಿಸುವುದು. ಕಫದ ಕೆಮ್ಮು ವಾಸಿಯಾಗುವುದು. ಇದು ಚರಕ ಮಹರ್ಷಿಗಳ ಅಮೂಲ್ಯ ಕೊಡುಗೆ.
ಕೃಪೆ : ಸಸ್ಯ ಕಣಜ
ಸೂಚನೆ : ಈ
ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ನಾನು ಆಯುರ್ವೇದ ವೈದ್ಯ ಅಲ್ಲ. ಔಷಧವಾಗಿ ಉಪಯೋಗಿಸಬಯಸುವವರು
ತಪ್ಪದೇ ಹೆಚ್ಚಿಗೆ ತಿಳಿದವರ ಹಾಗೂ ವೈದ್ಯರ ಸಲಹೆ ಪಡೆಯಿರಿ.
No comments:
Post a Comment